
ಜಗತ್ತಿನ ಗರಿಷ್ಠ ಬೆಲೆಯ ಕಾಫಿ ಅದರ ಆ ವೈಶಿಷ್ಟ್ಯ ಪಡೆಯುವುದು ಎಲ್ಲಿ ಗೊತ್ತೇ?ಬೇಡ! ಇದು ಹಿಂದೆ ಒಮ್ಮೆ ತಿಂದ ಕಾಫಿ ಎಂದಷ್ಟೇ ಹೇಳುತ್ತೇವೆ.
ಜಗತ್ತಿನ ಅತಿ ಶ್ರೀಮಂತ ಕಾಫಿಕುಡುಕರನ್ನು ಸೆಳೆಯುತ್ತಿರುವ ಬಹು ಶ್ರೀಮಂತ ’ಕೋಪಿ ಲೂವಾಕ್ ’ನ ಒಳಕತೆ ಕೇಳಬೇಕೇ? ನೂರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಈ ವಿಶಿಷ್ಟ ಕಾಫಿಯ ಆವಿಷ್ಕಾರ ಆಗಿತ್ತು. ಅದರ ನಿರ್ಯಾತವೂ ನಡೆಯುತ್ತಿತ್ತು. ಭಾರತದ ಬ್ರಿಟಿಷ್ ಪ್ಲಾಂಟರುಗಳು ಈ ಕಾಫಿಗೆ ಜ್ಯಾಕಲ್ ಕಾಫಿ ಅರ್ಥಾತ್ ಗುಳ್ಳೆ ನರಿಯ ಕಾಫಿ ಎಂಬ ಹೆಸರನ್ನು ಇತ್ತಿದ್ದರು. ಗುಳ್ಳೆ ನರಿಗಳು ಎಂದೂ ಕಾಫಿ ಹಣ್ಣುಗಳನ್ನು ತಿನ್ನುತ್ತಿರಲಿಲ್ಲ! ಆದರೂ, ಈ ಪ್ರಾಣಿಯ ಹೆಸರು ಇದಕ್ಕೆ ತಗಲಿಕೊಂಡಿತು! ಭಾರತದ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿ ಕಾಫಿಯ ಹಣ್ಣುಗಳನ್ನು ತಿನ್ನುವ ಪ್ರಾಣಿಗಳಾದ ಹಾರು ಬೆಕ್ಕು (ಫ್ಲೈಯಿಂಗ್ ಸ್ಕ್ವಿರೆಲ್), ಕೆಂಚಣಿಲು, ಕಬ್ಬೆಕ್ಕು, ಪುಣಿಗಿನ ಬೆಕ್ಕು, ಮಂಗ, ಮುಸಿಯ ಮುಂತಾದ ಪ್ರಾಣಿಗಳು ಹೇರಳವಾಗಿ ಇದ್ದುವು. ಇವು ಕಾಫಿ ಹಣ್ಣುಗಳನ್ನು ಭಕ್ಷಿಸಿದಾಗ ಅದರ ಮಿದು ಮತ್ತು ಸಿಹಿಯಾದ ಫಲಾಂಶ ಆ ಪ್ರಾಣಿಗಳ ಹೊಟ್ಟೆಯಲ್ಲಿ ಜೀರ್ಣವಾಗುತ್ತದೆ.
ಗಟ್ಟಿಯಾದ ಹೊರಕವಚ ಹೊಂದಿದ ಕಾಫಿಯ ಬೀಜಗಳು ಮಾತ್ರ ಜೀರ್ಣವಾಗದೆ ಅವುಗಳ ಮಲದೊಂದಿಗೆ ಹೊರಬರುತ್ತವೆ. ಇಂದಿಗೂ, ನಾವು ಕಾಫಿ ಬೀಜ ಬೆರೆತ ಪ್ರಾಣಿ ಅಮೇಧ್ಯವನ್ನು ತೋಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣುತ್ತೇವೆ. ಬಹು ಹಿಂದೆ, ಕೆಲವು ಬ್ರಿಟಿಷ್ ಪ್ಲಾಂಟರುಗಳು ಇಂತಹ ಪ್ರಾಣಿ ವಿಸರ್ಜಿತ ಕಾಫಿ ಬೀಜಗಳನ್ನು ಕಂಡರು. ಅವರ ಕುತೂಹಲ ಕೆರಳಿತು.
ಈ ಅಮೇಧ್ಯವನ್ನು ಅವರು ಆಳುಗಳ ಮುಖೇನ ಸಂಗ್ರಹಿಸಿ, ಒಂದು ಹದಕ್ಕೆ ಒಣಗಿಸಿ, ರಾಶಿ ಹಾಕಿಸಿದರು. ಹರಿಯುವ ನೀರಿನಲ್ಲಿ ತೊಳೆಯಿಸಿ ಒಣಗಿಸಿದರು. ಬೀಜಗಳ ಹೊರಕವಚ ಬೇರ್ಪಡಿಸಿ ಹುರಿದು ಕಾಫಿ ಕಷಾಯ ತಯಾರಿಸಿ ರುಚಿ ನೋಡಿದರು. ಅದು ಅವರ ಮನ ಗೆದ್ದಿತಂತೆ!
ಗುಳ್ಳೇನರಿ ಕಾಫಿಗೆ ಯಾಕೆ ಈ ವಿಶಿಷ್ಟ ಗುಣ?
ಪ್ರಾಣಿಗಳ ಜೀರ್ಣಾಂಗಗಳ ಮೂಲಕ ಹರಿದು ಹೊರಬಂದ ಈ ಕಾಫಿಯ ಮೇಲೆ ಅವುಗಳ ಹೊಟ್ಟೆಯಲ್ಲಿರುವ ಕಿಣ್ವಗಳು ಪ್ರಭಾವ ಬೀರಿದ್ದುವು. ಇಂಥಹಾ ಕಾಫಿಯ ಕಷಾಯದ ಪರಿಮಳ, ಸ್ವಾದ ಮತ್ತು ರುಚಿ ಅವರಿಗೆ ಅದ್ಭುತ ಎನಿಸಿತು! ಬಹು ಸಣ್ಣ ಪ್ರಮಾಣದಲ್ಲಿ ದೊರಕುತ್ತಾ ಇದ್ದ ಈ ಕಾಫಿ ಬೀಜಗಳನ್ನು ಅವರು ಜ್ಯಾಕಲ್ ಕಾಫಿ ಎಂದು ಹೆಸರಿಸಿದರು. ಐರೋಪ್ಯ ಮಾರುಕಟ್ಟೆಗಳಲ್ಲಿ ಪ್ರೀಮಿಯಂ ಬೆಲೆಗೆ ಮಾರಿ ಲಾಭ ಪಡೆಯುವಲ್ಲಿ ಮೊದಲಿಗರಾದರು.
ಮೊದಲನೇ ಮಹಾಯುದ್ಧದ ಕಾಲದಲ್ಲಿ ಭಾರತದ ಕಾಡುಗಳ ನಾಟಾಗಳನ್ನು ಬಹುವಾಗಿ ಕಡಿಯಲಾಯಿತಂತೆ. ಯುದ್ಧಾನಂತರ ಉಂಟಾದ ಆರ್ಥಿಕ ಹಿಂಜರಿಕೆಯಿಂದಾಗಿ ಕಾಫಿತೋಟಗಳಲ್ಲಿದ್ದ ಬೃಹತ್ ಮರಗಳನ್ನೂ ಕಡಿದರಂತೆ. ಈ ಕಾರಣಗಳಿಂದ ಕಾಫಿ ಹಣ್ಣು ತಿನ್ನುವ ವನ್ಯಪ್ರಾಣಿಗಳ ಸಂಖ್ಯೆ ನಶಿಸಿತು. ಅವುಗಳ ಅಮೇಧ್ಯದ ಲಭ್ಯತೆಯೂ ಕಡಿಮೆ ಆಯಿತಂತೆ. ಕ್ರಮೇಣ, ಈ ಕಾಫಿ ಬೀಜ ಸಂಗ್ರಹಿಸುವ ಪರಿಪಾಠವನ್ನು ಭಾರತದ ಪ್ಲಾಂಟರುಗಳು ನಿಲ್ಲಿಸಿಬಿಟ್ಟರಂತೆ! ಹಿರಿಯ ಪ್ಲಾಂಟರುಗಳಿಂದ ಕೇಳಿ ತಿಳಿದ ವಿಚಾರವಿದು. ಜ್ಯಾಕಲ್ ಕಾಫಿಯ ವಿಚಾರವನ್ನು ಹೆಚ್. ಎಲ್. ನಾಗೇಗೌಡ ತಾವು ಕಾಫಿಯ ಬಗ್ಗೆ ಬರೆದ ಬೆಟ್ಟದಿಂದ ಬಟ್ಟಲಿಗೆ ಎಂಬ ಅಪೂರ್ವ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಕೋಪಿ ಲುವಾಕ್
ಭಾರತದ ಪ್ಲಾಂಟರುಗಳು ಕೈಬಿಟ್ಟ ಈ ಸಂಗ್ರಹಣಾಕ್ರಮ ಇತ್ತೀಚೆಗೆ ಇಂಡೋನೇಶಿಯದ ಕಾಫಿ ಬೆಳೆಗಾರರ ಗಮನವನ್ನು ಸೆಳೆಯಿತು.
ಅಸಾಮಾನ್ಯವಾಗಿರುವ ಸಿವೆಟ್ ಎಂದು ಕರೆಯುವ ಪುಣುಗಿನ ಬೆಕ್ಕುಗಳ ಮಲದಿಂದ ಪಡೆದ ಕಾಫಿಯು ಅತ್ಯಂತ ರುಚಿಕರ ಎಂದು ಪರಿಗಣಿಸಲ್ಪಡುತ್ತದೆ. ಮೊದಮೊದಲಿಗೆ ಈ ಪ್ರಾಣಿಗಳು ಗಿಡ ಏರಿ ಹಣ್ಣು ಭಕ್ಷಿಸಿ ವಿಸರ್ಜಿಸಿದ ಮಲವನ್ನು ಹುಡುಕಿ ಸಂಗ್ರಹಿಸುತ್ತಿದ್ದರು.
ಹೀಗೆ ಮಾಡುವುದು ಕಷ್ಟ ಅನ್ನಿಸಿದಾಗ, ಪುಣುಗಿನ ಬೆಕ್ಕುಗಳ ವ್ಯವಸ್ಥಿತ ಸಾಕಣೆ ಪ್ರಾರಂಭವಾಯಿತು.
ಇಂಡೋನೇಶಿಯನ್ನರ ಪ್ರಕಾರ, ಪುಣುಗು ಎಂಬ ಸುಗಂಧದ್ರವ್ಯ ನೀಡುವ ಪುಣುಗು ಬೆಕ್ಕುಗಳ ಜೀರ್ಣಾಂಗಗಳ ಕಿಣ್ವರಸಗಳು ಕೋಪಿ ಲುವಾಕ್ನ ಅಪೂರ್ವ ಪರಿಮಳ ಮತ್ತು ರುಚಿಗೆ ಕಾರಣ. ಈ ಬೆಕ್ಕುಗಳನ್ನು ಗೂಡುಗಳಲ್ಲಿ ಸಾಕುವ ಕ್ರಮ ಇಂದು ರೂಢಿಯಲ್ಲಿದೆ. ಅವುಗಳ ದೇಹದ ಪೃಷ್ಠ ಭಾಗದಲ್ಲಿರುವ ಚಿಕ್ಕ ಗ್ರಂಥಿಗಳಿಂದ ಸದಾ ಒಸರುವ ಸುವಾಸನೆಯುಳ್ಳ ಪುಣುಗನ್ನು ಅವರು ಸಂಗ್ರಹಿಸುತ್ತಾರೆ. ಔಷಧೀಯ ಮತ್ತು ಪರಿಮಳ ದ್ರವ್ಯಗಳ ಉದ್ಯಮಗಳು ಈ ಪುಣುಗನ್ನು ಉತ್ತಮ ಬೆಲೆಗೆ ಖರೀದಿಸುತ್ತವೆ. ಪುಣುಗು ಬೆಕ್ಕುಗಳ ಫಾರಂ ನಡೆಸುವರರಿಗೆ ಇದು ಉಪ ಆದಾಯ ತರುತ್ತದೆ.
ಗೂಡುಗಳಲ್ಲಿ ಸಾಕಿದ ಸಿವೆಟ್ ಬೆಕ್ಕುಗಳಿಗೆ ಕಾಫಿಯ ಕೊಯ್ಲಿನ ಸಮಯದಲ್ಲಿ ಮಾಗಿದ ಕಾಫಿಯ ಹಣ್ಣುಗಳನ್ನು ತಿನ್ನಿಸುತ್ತಾರೆ. ಅವುಗಳ ಮಲವನ್ನು ಸಂಗ್ರಹಿಸುತ್ತಾರೆ. ಅದರಲ್ಲಿ ಅಡಕವಾದ ಕಾಫಿ ಬೀಜಗಳನ್ನು ಆಯ್ದು ಸಂಸ್ಕರಿಸಿ ರಫ್ತು ಮಾಡುತ್ತಾರೆ. ಈ ತಂತ್ರಜ್ಞಾನದಲ್ಲಿ ಇಂದು ಇಂಡೋನೇಶಿಯನ್ನರು ಮುಂಚೂಣಿಯಲ್ಲಿ ಇದ್ದಾರೆ.
ಅಪೂರ್ವ ಪರಿಮಳ, ಸ್ವಾದ, ವಿಶಿಷ್ಟವಾದ ಕಡುತನ ಮತ್ತು ಆಮ್ಲೀಯತೆ ಉಳ್ಳ ಈ ವಿಶಿಷ್ಟ ಕಾಫಿಯನ್ನು ಇಂಡೋನೇಶಿಯನ್ನರು ಕೋಪಿ ಲೂವಾಕ್ ಅಂತ ಹೆಸರಿಸಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಪಾಶ್ಚಾತ್ಯರು ಇದನ್ನು ಕ್ಯಾಟ್ ಪೂ ಕಾಫಿ ಅಥವಾ ಫಾಕ್ಸ್ ಡಂಗ್ ಕಾಫಿ ಎಂದೂ ಕರೆಯುತ್ತಾರೆ. ಈ ವಿಧದ ಕಾಫಿಯ ಜಾಗತಿಕ ಲಭ್ಯತೆ ವರ್ಷಕ್ಕೆ ಮುನ್ನೂರು ಕಿಲೋಗಳಿಗಿಂತ ಹೆಚ್ಚಿಲ್ಲ!
ಹಾಗಾಗಿ, ಉತ್ತಮ ಕೋಪಿ ಲೂವಾಕ್ ಬೀಜಗಳ ಬೆಲೆ ಇಂದು ಪೌಂಡಿಗೆ ಕೇವಲ ಆರುನೂರು ಡಾಲರ್. ಅಂದರೆ, ಒಂದು ಕಿಲೋಗೆ ರೂಪಾಯಿ 62000! ಜಗತ್ತಿನ ಈ ಅತಿ ದುಬಾರಿ ಕಾಫಿಯು ಪಾಶ್ಚಿಮಾತ್ಯ ದೇಶಗಳ ವೈಭವೋಪೇತ ಕಾಫಿಗೃಹಗಳಲ್ಲಿ ಲಭ್ಯ. ಇದನ್ನು ಸೇವಿಸುವುದೇ ಅತಿ ಶ್ರೀಮಂತರಿಗೆ ಪ್ರತಿಷ್ಠೆಯ ವಿಷಯ.
ಒಂದು ಕಪ್ ಕಾಫಿಗೆ ಐವತ್ತು ಡಾಲರ್! ಅಂದರೆ, ರೂಪಾಯಿ 2350 ಮತ್ತು ಟಿಪ್ಸ್! ನಮಗೆ, ಅಂದರೆ ಭಾರತೀಯರಿಗೆ, ಇದನ್ನು ಅಷ್ಟು ಹಣ ತೆತ್ತು, ಮುಖ ಸಿಂಡರಿಸದೆ ಸಂಭ್ರಮದಿಂದ ಸವಿಯಲು ಸಾಧ್ಯವೇ?
ಸೌಜನ್ಯ: ಅಡಿಕೆಪತ್ರಿಕೆ